ಸಮುದ್ರಗುಪ್ತ
	ಗುಪ್ತ ಸಂತತಿಯ ಪ್ರಸಿದ್ಧ ರಾಜ (335-80). ಪ್ರಾಚೀನ ಭಾರತದ ಇತಿಹಾಸದ ಬಹು ಪ್ರಖ್ಯಾತ ದೊರೆ. ಬಹುಮುಖ ಪ್ರತಿಭೆಯ ಈ ದೊರೆ ಯೋಧನಾಗಿ, ದಕ್ಷ ಆಡಳಿತಗಾರನಾಗಿ, ಕಲಾವಿದನಾಗಿ, ಕವಿಯಾಗಿ ಖ್ಯಾತನಾಗಿದ್ದಾನೆ. ಒಂದನೆಯ ಚಂದ್ರಗುಪ್ತನ ಮಗನಾದ ಸಮುದ್ರಗುಪ್ತ ತಂದೆಯ ಹಿರಿಯ ಮಗನಲ್ಲದಿದ್ದರೂ ತನ್ನ ಸಾಮಥ್ರ್ಯ, ಅಸಾಧಾರಣ ಬುದ್ಧಿಶಕ್ತಿಯ ಬಲದಿಂದ ರಾಜನಾಗಿ ಅಧಿಕಾರಕ್ಕೆ ಬಂದ. ಆಸ್ಥಾನಕವಿ ಹರಿಸೇನನಿಂದ ರಚಿತವಾದ ಅಲಹಾಬಾದ್ ಸ್ತಂಭಶಾಸನ ಸಮುದ್ರಗುಪ್ತನ ವ್ಯಕ್ತಿತ್ವವನ್ನೂ ಸಾಧನೆಗಳನ್ನೂ ಸಮರ್ಥವಾಗಿ ಚಿತ್ರಿಸುತ್ತದೆ. 

	ಈತ ಪಟ್ಟಕ್ಕೆ ಬಂದ ತರುವಾಯ ಹಲವಾರು ದಂಡಯಾತ್ರೆಗಳನ್ನು ಕೈಗೊಂಡ. ಮೊದಲು ಗಂಗಾನದಿ ಕಣಿವೆಯ ರಾಜರನ್ನು ಮಣಿಸಿದ. ರಾಜಸ್ತಾನದ ಅರಣ್ಯ ಸಮುದಾಯಗಳ ನಾಯಕರನ್ನು ಅಡಗಿಸಿದ. ಉತ್ತರಾಧಿಕಾರತ್ವವನ್ನು ವಿರೋಧಿಸಿದ. ಅಚ್ಯುತ ಮತ್ತು ನಾಗಸೇನರನ್ನು ಸೋಲಿಸಿದ್ದು ಇವನ ಮುಖ್ಯ ಸಾಧನೆ. ಈತ ದಕ್ಷಿಣಾಪಥದ ದಂಡಯಾತ್ರೆ ಯನ್ನು ಕೈಗೊಂಡು ದಕ್ಷಿಣದ ಕೋಸಲದ ಮಹೇಂದ್ರ, ಮಹಾಕಾಂತಾರದ ವ್ಯಾಘ್ರರಾಜ, ಕೋಸಲದ ಮಾಂತರಾಜ, ಪಿಷ್ಠಪುರದ ಮಹೇಂದ್ರಗಿರಿ, ಕೊಟ್ಟೂರದ ಸ್ವಾಮಿದತ್ತ, ಎರಂಡಪಲ್ಲದ ದಮನ, ಕಂಚಿಯ ವಿಷ್ಣುಗೋಪ, ಅವಮುಕ್ತದ ನೀಲರಾಜ, ವಂಗದ ಹಸ್ತಿವರ್ಮ, ಪಲ್ಲಕ್ಕಾದ ಉಗ್ರಸೇನ, ದೇವರಾಷ್ಟ್ರದ ಕುಬೇರ, ಮತ್ತು ಕೌಸ್ಥಲಪುರದ ಧನಂಜಯ ಈ ಹನ್ನೆರಡು ಜನ ರಾಜರನ್ನು ಸೋಲಿಸಿದನೆಂದು ಒಂದು ಶಾಸನ ತಿಳಿಸುತ್ತದೆ. ದಕ್ಷಿಣದ ಈ ದಿಗ್ವಿಜಯದ ಬಗ್ಗೆ ಕೆಲವು ವಿದ್ವಾಂಸರು ಸಂದೇಹವನ್ನೂ ವ್ಯಕ್ತಪಡಿಸಿದ್ದಾರೆ. ಸಮುದ್ರಗುಪ್ತ ಕಾಮರೂಪ ದೇವಕ ಸಮತಾಕ್ಷ, ನೇಪಾಳ ಮತ್ತು ಕತ್ರಿಪುರದ ಬುಡಕಟ್ಟು ಜನಾಂಗದ ಗಣರಾಜ್ಯಗಳನ್ನೂ ಸೋಲಿಸಿದ್ದನೆಂದು ಕಂಡುಬರುತ್ತದೆ. ದಕ್ಷಿಣಾಪಥದ ದಂಡಯಾತ್ರೆಯಾದ ಅನಂತರ ಈತ ಆರ್ಯಾವರ್ತದ ದಂಡಯಾತ್ರೆಯನ್ನು ಕೈಗೊಂಡು ವಾಕಾಟಕ ರುದ್ರದೇವ, ಮತ್ತಿಲ, ನಾಗದೇವ, ನಾಗದತ್ತ, ಗಣಪತಿ ನಾಗಚಂದ್ರವರ್ಮ, ನಾಗಸೇನ, ನಂದಿ, ಅಚ್ಯುತ, ಅಸ್ಸಾಮಿನ ಬಲವರ್ಮ ಮೊದಲಾದ ದೊರೆಗಳನ್ನು ಸೋಲಿಸಿದ. ಅನಂತರ ಹದಿನೆಂಟು ಅಡವಿ ರಾಜ್ಯಗಳ ರಾಜರನ್ನು ಸೋಲಿಸಿದ. ಆಗ್ನೇಯ ಏಷ್ಯದ ರಾಜ್ಯಗಳು, ಸಿಂಹಳ ಶಕಕ್ಷತ್ರಪರು ಮೊದಲಾದ ನೆರೆರಾಜ್ಯಗಳೊಡನೆ ಸ್ನೇಹಸಂಬಂಧ ವನ್ನೂ ಹೊಂದಿದ್ದ. ಈತನ ರಾಜ್ಯ ಉತ್ತರದ ಹಿಮಾಲಯದಿಂದ ದಕ್ಷಿಣದ ನರ್ಮದಾನದಿಯ ವರೆಗೆ ಬ್ರಹ್ಮಪುತ್ರದಿಂದ ಪಶ್ಚಿಮದ ಯಮುನಾ ಚಂಬಲ್ ವರೆಗೆ ವ್ಯಾಪಿಸಿತ್ತು. ತನ್ನ ದಿಗ್ವಿಜಯದ ಕುರುಹಾಗಿ ಇವನು ಅಶ್ವಮೇಧಯಾಗವನ್ನು ಮಾಡಿ ವಿಶೇಷ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದ. 

	ಈತ ಭಾರತದ ಆದರ್ಶ ರಾಜನ ಪ್ರತೀಕವೆಂದು ಪರಿಗಣಿಸಲ್ಪಟ್ಟಿ ದ್ದಾನೆ. ಇವನು ನುರಿತ ಯೋಧ, ದಕ್ಷ ಆಡಳಿತಗಾರ ಹಾಗೂ ದೂರದೃಷ್ಟಿಯ ರಾಜನೀತಿಜ್ಞನಾಗಿದ್ದ. ಕಾವ್ಯ, ಸಂಗೀತ ಮತ್ತು ವಿವಿಧ ಕಲೆಗಳಲ್ಲಿ ಪರಿಣತನಾಗಿದ್ದ. ಅಲಹಾಬಾದ್ ಶಾಸನ ಸಮುದ್ರಗುಪ್ತನನ್ನು ದೇವಗುರುವಾದ ಬೃಹಸ್ಪತಿಗೆ ಮೀರಿದ ತೀಕ್ಷ್ಣಬುದ್ಧಿ ವಿಶಾರದನೆಂದೂ ತುಂಬುರುನಾರದರಂತೆ ಗಾನವಿಶಾರದನೆಂದೂ ವರ್ಣಿಸುತ್ತದೆ. ಈತ ಸಾಹಿತ್ಯ ಕಲೆಗಳ ಪೋಷಕನೂ ಸ್ವತಃ ಕವಿಯೂ ವಿದ್ವಾಂಸನೂ ಆಗಿದ್ದ. ಇವನು ಸಂಸ್ಕøತದಲ್ಲಿ ಕೃಷ್ಣಚರಿತವೆಂಬ ಗ್ರಂಥವನ್ನು ಬರೆದಿದ್ದನೆಂದು ತಿಳಿದುಬರುತ್ತದೆ. ವಿಷ್ಣುವಿನ ಆರಾಧಕನಾಗಿದ್ದರೂ ಧರ್ಮಸಹಿಷ್ಣುವಾಗಿದ್ದ.								
	(ಎಮ್.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ